ಮೊರೇನುಗಳು
ಹಿಮನದಿಯಿಂದ ಆದ ಶೇಖರಣೆ. ಹಿಮನದಿಗಳು ಕಣಿವೆಗಳಲ್ಲಿ ಪ್ರವಹಿಸುವಾಗ ಅಕ್ಕಪಕ್ಕದಲ್ಲಿರುವ ಶಿಲೆಗಳನ್ನು ತೀಡುವುದರಿಂದ ಆ ಶಿಲೆಗಳು ಚೂರುಚೂರಾಗಿ ಹಿಮನದಿಯ ಮೇಲ್ಭಾಗದಲ್ಲಿ ಬಿದ್ದು ಶೇಖರವಾಗುತ್ತವೆ. ಇವನ್ನು ಹಿಮನದಿ ತನ್ನೊಡನೆ ಹೊತ್ತುಕೊಂಡು ಮಂದಗತಿಯಿಂದ ಮುಂದಕ್ಕೆ ಸಾಗುತ್ತದೆ. ಕ್ರಮೇಣ ಈ ಶಿಲಾಖಂಡಛಿದ್ರಗಳು ಹಿಮನದಿಯ ಇಕ್ಕೆಲಗಳಲ್ಲೂ ಅದರ ಅಂಚಿನುದ್ದಕ್ಕೂ ಹರಡಿ ವಿಶೇಷ ರೀತಿಯ ರಿಬ್ಬನ್ನುಗಳಂತೆ (ದಂಡೆ) ಕಂಡುಬರುತ್ತವೆ. ಇವನ್ನು ಅಂಚಿನ ಅಥವಾ ಪಾಶ್ರ್ವಿಕ ಮೊರೇನುಗಳು ಎಂದು ಕರೆಯುತ್ತಾರೆ.

	ಅಕ್ಕಪಕ್ಕದ ಕಣಿವೆಗಳಲ್ಲಿ ಹರಿಯುತ್ತಿರುವ ಹಿಮನದಿಗಳು ಒಟ್ಟುಕೂಡಿದಾಗ, ಎರಡೂ ಕಡೆಯ ದಂಡೆಗಳೂ ಒಂದುಗೂಡಿ ಸಂಗಮದಿಂದ ಮುಂದಕ್ಕೆ ಹಿಮನದಿಯ ಮಧ್ಯದಲ್ಲಿ ಮೊರೇನುಗಳು ಕಾಣಿಸುತ್ತವೆ. ಅಂದರೆ ಆಚೀಚಿನ ಎರಡು ಪಾಶ್ರ್ವಿಕ ಮೊರೇನುಗಳ ಮಧ್ಯೆ ಮತ್ತೊಂದು ದಂಡೆ ತೋರಿಬರುತ್ತದೆ. ಇದಕ್ಕೆ ಮಧ್ಯಸ್ಥಿತ ಮೊರೇನು ಎಂದು ಹೆಸರು. ಉಪಹಿಮನದಿಗಳು ಮುಖ್ಯನದಿಗೆ ಸೇರಿದಂತೆಲ್ಲ ಈ ದಂಡೆಗಳ ಸಾಲುಗಳೂ ಅದಕ್ಕೆ ಅನುಗುಣವಾಗಿ ಹೆಚ್ಚಾಗುತ್ತವೆ.

	ಶಿಲಾಖಂಡಛಿದ್ರಗಳು ಹಿಮನದಿಯ ಪಾತ್ರದಲ್ಲಿರುವ ಬಿರುಕುಗಳಲ್ಲಿ ಶೇಖರವಾಗಿರಬಹುದು ಅಥವಾ ಅವುಗಳಿಂದಲೇ ಆವರಿಸಲ್ಪಡಬಹುದು. ಇಂಥವಕ್ಕೆ ಆವೃತ ಮೊರೇನುಗಳು ಎಂದು ಹೆಸರು. ಇವುಗಳಲ್ಲಿ ಕೊಂಚಭಾಗ ಹಿಮನದಿಯ ತಳವನ್ನು ಮುಟ್ಟಿ ಮತ್ತು ಅಲ್ಲಿ ಶೇಖರವಾಗಿರುವ ಶಿಲಾಖಂಡಗಳೊಡನೆ ಮಿಳಿತಗೊಂಡು ಉಪಮೊರೇನುಗಳಾಗುತ್ತವೆ. ಕೆಲವು ವೇಳೆ ಹಿಮನದಿಯ ತಳಭಾಗದಲ್ಲಿ ಅತಿಹೆಚ್ಚಿನ ಮೊತ್ತದಲ್ಲಿ ಶಿಲಾಖಂಡಗಳು ಶೇಖರಗೊಂಡು ಅವಷ್ಟನ್ನೂ ಮುಂದಕ್ಕೆ ಸಾಗಿಸಲು ಹಿಮನದಿಗೆ ಸಾಧ್ಯವಾಗದಿರಬಹುದು. ಇವನ್ನು ಭೂಗತ ಅಥವಾ ತಳದ ಮೊರೇನುಗಳು ಎನ್ನುವುದಿದೆ. ಇವುಗಳ ಮೇಲ್ಭಾಗದಲ್ಲಿ ಹಿಮಪ್ರವಾಹದ ಚಟುವಟಿಕೆ ಮಾತ್ರ ಒಂದೇ ರೀತಿ ಮುಂದುವರಿಯುತ್ತಿರುತ್ತದೆ. ಹಿಮನದಿ ಹೊತ್ತು ತರುವ ಮೊರೇನುಗಳಲ್ಲಿ ಧೂಳುಕಣದ ಗಾತ್ರದಿಂದ ದೊಡ್ಡ ದೊಡ್ಡ ಗುಂಡುಕಲ್ಲುಗಳವರೆಗೆ ನಾನಾಗಾತ್ರದ ಶಿಲಾಖಂಡಗಳಿರುತ್ತವೆ. ಹಿಮಕರಗಿ ನೀರಾದಾಗ ಈ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಭೂಮಿಯ ಮೇಲೆ ಚದರಿಹೋಗಿರುತ್ತವೆ.  ಹೀಗಾಗದೆ ಹಿಮ ಬಹುಕಾಲದ ತನಕ ಒಂದೇ ಪ್ರದೇಶದಲ್ಲಿ ಇದ್ದಲ್ಲಿ ಇವೆಲ್ಲವೂ ಬಿಲ್ಲಿನಾಕಾರದ ಸಣ್ಣ ಸಣ್ಣ ದಿಬ್ಬಗಳಾಗಿ ಮಾರ್ಪಡುತ್ತವೆ. ಇಂಥವನ್ನು ಅಂತಿಮ ಮೊರೇನುಗಳೆನ್ನುತ್ತಾರೆ.
 
ಹಿಮ ನದಿಗಳ ಚಟುವಟಿಕೆಗಳಿಗೆ ಒಳಗಾದ ಭೂಪ್ರದೇಶಗಳಲ್ಲಿ ಮೊರೇನುಗಳನ್ನು ಸಾಮಾನ್ಯವಾಗಿ ಕಾಣಬಹುದು.  ಈ ಕಾರಣಕ್ಕಾಗಿ ಮೊರೇನುಗಳನ್ನು ಎಂದೋ ಆಗಿಹೋದ ಈ ಬಗೆಯ ಚಟುವಟಿಕೆಯ ಕೈಗಂಬಗಳು ಎಂದು ಸಂಬೋಧಿಸುವುದಿದೆ.
     
(ಬಿ.ವಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ